1883-1957. ಸಾಂಸ್ಕøತಿಕ ಮಾನವಶಾಸ್ತ್ರ ಕುರಿತು ಅಪಾರ ಕೆಲಸ ಮಾಡಿದ ಅಮೆರಿಕದ ಪ್ರಸಿದ್ಧ ಮಾನವಶಾಸ್ತ್ರಜ್ಞ. 1883 ಜೂನ್ 12ರಂದು ವಿಯೆನ್ನದಲ್ಲಿ ಜನಿಸಿದ. ಈತನ ತಂದೆ ಹಂಗೇರಿಯವ, ತಾಯಿ ಆಸ್ಟ್ರಿಯಾದವಳು. ಈತ ತನ್ನ ಹತ್ತನೆಯ ವಯಸ್ಸಿನಲ್ಲಿ ತಂದೆಯೊಡನೆ ಅಮೆರಿಕಕ್ಕೆ ಬಂದು ನೆಲೆಸಿದ. ನ್ಯೂ ಯಾರ್ಕ್ ಕಾಲೇಜಿನಲ್ಲಿ ವ್ಯಾಸಂಗಮಾಡಿ ಪದವೀಧರನಾದ ಮೇಲೆ ಸುಮಾರು ಮೂರು ವರ್ಷಗಳ ಕಾಲ ಉಪಾಧ್ಯಾಯನಾಗಿದ್ದ. ಅನಂತರ ಈತ ಕೊಲಂಬಿಯ ವಿಶ್ವವಿದ್ಯಾಲಯ ಸೇರಿ ಫ್ರಾನ್ಜ್ ಬೋವಾಸ್ ಎಂಬ ವಿದ್ವಾಂಸನ ಮಾರ್ಗದರ್ಶನದಲ್ಲಿ ಮಾನವಶಾಸ್ತ್ರದಲ್ಲಿ ಸಂಶೋಧನೆ ಕೈಗೊಂಡು 1908ರಲ್ಲಿ ಪಿಎಚ್.ಡಿ. ಪಡೆದ. 1907-17ರ ತನಕ ನ್ಯೂಯಾರ್ಕಿನ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ ಸಂಸ್ಥೆಯಲ್ಲಿ ಕ್ಲಾರ್ಕ್ ವಿಸ್ಲರ್ ಎಂಬ ವಿದ್ವಾಂಸನ ಆಶ್ರಯದಲ್ಲಿ ಕೆಲಸಮಾಡಿದ. ಈ ಸಂದರ್ಭದಲ್ಲಿ ಅಮೆರಿಕದ ಆದಿವಾಸಿ ಇಂಡಿಯನ್ನರ ಬಗ್ಗೆ ತನ್ನ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳನ್ನು ಕೇಂದ್ರೀಕರಿಸಿಕೊಂಡು ಸಂಶೋಧನೆ ನಡೆಸಿದ. 1921-50ರತನಕ ಕ್ಯಾಲಿಫೋರ್ನಿಯ, ಬರ್ಕ್‍ಲೀ ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ, ಮಾನವಶಾಸ್ತ್ರದ ಬೆಳೆವಣಿಗೆಗೆ ಕಾರಣಕರ್ತನಾದ. 

ಈತ ಮಾನವಶಾಸ್ತ್ರ ಕುರಿತು ಅನೇಕ ಸಂಶೋಧನ ಲೇಖನಗಳನ್ನೂ  ಗ್ರಂಥಗಳನ್ನೂ ಪ್ರಕಟಿಸಿದ್ದು, ಬಹುಪಾಲು ಬರೆವಣಿಗೆ ಸಾಂಸ್ಕøತಿಕ ಮಾನವಶಾಸ್ತ್ರ ವಿಭಾಗಕ್ಕೆ ಸಂಬಂಧಿಸಿದುದಾಗಿದೆ. ಕಲ್ಚರ್ ಅಂಡ್ ಎತ್ನೊಗ್ರಫಿ (1917), ಪ್ರಿಮಿಟಿವ್ ಸೊಸೈಟಿ(1920), ಪ್ರಿಮಿಟಿವ್ ರಿಲಿಜನ್ (1924), ದಿ ಕ್ರೋ ಇಂಡಿಯನ್ಸ್ (1935), ಹಿಸ್ಟರಿ ಆಫ್ ಎತ್ನೊಲಾಜಿಕಲ್ ಥಿಯರಿ(1937), ಸೋಶಿಯಲ್ ಆರ್ಗನೈಸೇಷನ್(1948)-ಇವು ಇವನ ಮುಖ್ಯ ಕೃತಿಗಳು. ಕ್ರೋ ಆದಿವಾಸಿಗಳನ್ನು ಕುರಿತು ಮಾನವಕುಲ ಶಾಸ್ತ್ರೀಯ ಹಾಗೂ ಭಾಷಾವೈe್ಞÁನಿಕ ದೃಷ್ಟಿಯಿಂದ ಸಮಗ್ರವಾಗಿ ಸಂಶೋಧನೆ ನಡೆಸಿ ಪ್ರಕಟಿಸಿದ ದಿ ಕ್ರೋ ಇಂಡಿಯನ್ಸ್ ಎಂಬ ಗ್ರಂಥ ಈತನಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇದು ವಿದ್ವಾಂಸರ ಮನ್ನಣೆಗೂ ಪಾತ್ರವಾಗಿದೆ. ಪ್ರಿಮಿಟಿವ್ ಸೊಸೈಟಿ ಎಂಬ ಗ್ರಂಥ ಸಾಮಾಜಿಕ ಸಂಘಟನೆ ವಾದದ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದೆ. ಮಾನವಶಾಸ್ತ್ರದ ಮೂಲಸಾರವೇನು, ಅದರ ರೂಪರೇಖೆಗಳೇನು ಎಂಬುದನ್ನು ಹಿಸ್ಟರಿ ಆಫ್ ಎತ್ನೊಲಾಜಿಕಲ್ ಥಿಯರಿ ಎಂಬ ಗ್ರಂಥ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತದೆ. ಮಾನವಶಾಸ್ತ್ರದ ತಿಳಿವಳಿಕೆಯ ಬಗ್ಗೆ ಇದೊಂದು ಕೈಗನ್ನಡಿಯಿದ್ದಂತೆ ಎನ್ನಬಹುದು. 

ಮಾನವಶಾಸ್ತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಅಸಾಧಾರಣ ಸೇವೆಗಾಗಿ ಈತನಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿದ್ದುವು. ಈತ 1916-17ರಲ್ಲಿ ಅಮೆರಿಕನ್ ಫೋಕ್‍ಲೋರ್ ಸೊಸೈಟಿಯ ಅಧ್ಯಕ್ಷನಾಗಿದ್ದ. 1920-27ರ ತನಕ ಅಮೆರಿಕನ್ ಎತ್ನೊಲಾಜಿಕಲ್ ಸೊಸೈಟಿಯ ಅಧ್ಯಕ್ಷನಾ ಗಿದ್ದ. 1931ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‍ಗೆ ಸದಸ್ಯನಾಗಿ ಚುನಾಯಿತನಾದ. 1935ರಲ್ಲಿ ಈತನನ್ನು ಅಮೆರಿಕನ್ ಆಂತ್ರೊಪಾಲಜಿಕಲ್ ಸೊಸೈಟಿಯ ಅಧ್ಯಕ್ಷನನ್ನಾಗಿ ಆಯ್ಕೆಮಾಡಿ ಗೌರವಿಸಲಾಯಿತು. ಈತನಿಗೆ 1947ರಲ್ಲಿ ವೈಕಿಂಗ್ ಪ್ರಶಸ್ತಿಯೂ 1948ರಲ್ಲಿ ಹಕ್ಸ್‍ಲೆ ಪ್ರಶಸ್ತಿಯೂ ಲಭ್ಯವಾಗಿದ್ದುವು. ಈತ ಕೆಲಕಾಲ ಅಮೆರಿಕನ್ ಆಂತ್ರೊಪಾಲಜಿಸ್ಟ್ ಎಂಬ ಪತ್ರಿಕೆಗೆ ಸಂಪಾದಕನಾಗಿದ್ದ(1924-33). 1957 ಸೆಪ್ಟೆಂಬರ್ 21ರಂದು ಕ್ಯಾಲಿಫೋರ್ನಿಯದಲ್ಲಿ ನಿಧನಹೊಂದಿದ. 

	(ಎಚ್.ಎಮ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ